ನರಿ ಈರುಳ್ಳಿ -
	ಲಿಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ಮೂಲಿಕೆ. ಇದರ ಗೆಡ್ಡೆಯನ್ನು ಔಷಧವಾಗಿ ಬಳಸುತ್ತಾರೆ. ಅರ್ಜೀನಿಯ ಮ್ಯಾರಿಟೀಮ ಎಂಬುದು ಇದರ ಶಾಸ್ತ್ರೀಯ ಹೆಸರು; ಗೆಡ್ಡೆಗೆ ಔಷಧಶಾಸ್ತ್ರದ ಹೆಸರು ಸಿಲ್ಲ. ಇಂಗ್ಲಿಷಿನಲ್ಲಿ ಇದಕ್ಕೆ ಸ್ಕ್ವಿಲ್ ಎಂಬ ಹೆಸರುಂಟು. ಇದು ಮೆಡಿಟರೇನಿಯನ್ ಸಮುದ್ರದ ತೀರದಲ್ಲಿ ವಿಶೇಷವಾಗಿ ಬೆಳೆಯುತ್ತದೆ. ಇದರ ಗುಣ, ಲಕ್ಷಣಗಳ ವಿಷಯ ಈಜಿಪ್ಟ್ ದೇಶದವರಿಗೂ ತಿಳಿದಿತ್ತು. ಎಬಿರಿಸ್ (ಕ್ರಿ.ಪೂ. 1500) ಎಂಬ ಗ್ರಂಥದಲ್ಲಿ ಇದರ ಉಲ್ಲೇಖ ಇದೆ. ರೋಮನರು ಇದನ್ನು ಹೃದಯ ಉತ್ತೇಜಕವಾಗಿ, ವಮನಕಾರಿಯಾಗಿ ಮತ್ತು ಇಲಿವಿಷವಾಗಿ ಉಪಯೋಗಿಸುತ್ತಿದ್ದರು.

	ನರಿ ಈರುಳ್ಳಿಯ ಗೆಡ್ಡೆಯಲ್ಲಿ ಸಿಲ್ಲಾರಿನ್ ಎ ಮತ್ತು ಬಿ ಎಂಬ ಎರಡು ಗ್ಲೂಕೊಸೈಡ್‍ಗಳು ಇವೆ. ಡಿಜಿಟ್ಯಾಲಿಸ್ ಎಂಬ ಗಿಡದಲ್ಲಿರುವ ಗ್ಲೂಕೊಸೈಡ್ ಪದಾರ್ಥಗಳಂತೆ ಇವು ಸಹ ಹೃದಯವನ್ನು ಉದ್ರೇಕಗೊಳಿಸುವ ದ್ರವ್ಯಗಳು. ಆದರೆ ಅಷ್ಟು ಶಕ್ತಿಯುತವಲ್ಲ. ನರಿ ಈರುಳ್ಳಿಯಿಂದ ಟಿಂಚರ್ ಸಿಲ್ಲ ಎಂಬ ದ್ರವ ಔಷಧಿಯನ್ನು ತಯಾರಿಸುತ್ತಾರೆ. ಇವುಗಳ ಸೇವನೆಯ ಪ್ರಮಾಣ

    	ಸಿಲ್ಲಾರಿನ್ ಬಿ......... 0.5-1 ಮಿ.ಗ್ರಾಂ
    	ಟಿಂಚರ್ ಸಿಲ್ಲ........ 5-30 ತೊಟ್ಟುಗಳು.

	ನರಿ ಈರುಳ್ಳಿ ಸೇರಿರುವ ಗೈಸ್ ಪಿಲ್ ಎಂಬ ಮಾತ್ರೆಯನ್ನು ಮೂತ್ರಕವಾಗಿ ಹಿಂದೆ ಉಪಯೋಗಿಸುತ್ತಿದ್ದರು. ಅಂತೆಯೇ ಇದರಿಂದ ತಯಾರಿಸಲಾಗಿರುವ ಗೀಸ್ ಲಿಂಕ್‍ಟಸ್ ಎಂಬ ಔಷಧಿಯನ್ನು ಕೆಮ್ಮಲಿಗೆ ಉಪಯೋಗಿಸುತ್ತಾರೆ. ನರಿ ಈರುಳ್ಳಿಯನ್ನು ವಿಶೇಷವಾಗಿ ಕೆಮ್ಮಲಿಗೆ ಶ್ಲೇಷ್ಮವಿಸರ್ಜಕವಾಗಿ (ಎಕ್ಸ್‍ಪೆಕ್ಟೊರೆಂಟ್) ಉಪಯೋಗಿಸುತ್ತಾರೆ. ಶ್ಲೇಷ್ಮೋತ್ಪತ್ತಿ ಮಾಡುವ ಜೀವಕೋಶಗಳ ಮೇಲೆ ನೇರಕ್ರಿಯೆಯಿಂದ ಅವುಗಳ ಸ್ರವನವನ್ನು ಈ ಔಷಧ ಹೆಚ್ಚಿಸುತ್ತದೆ. ಚುಚ್ಚುಮದ್ದು ರೀತಿಯಾಗಿ ಈ ಔಷಧವನ್ನು ರಕ್ತನಾಳದ ಒಳಹೊಗಿಸಿದರೆ ರಕ್ತದ ಒತ್ತಡ ಅಧಿಕವಾಗುತ್ತದೆ. ಇದರ ಉರಿವೇಳಿಕೆ ಗುಣದಿಂದ ವಾಕರಿಕೆ, ವಮನವುಂಟಾಗುತ್ತದೆ. ನರಿ ಈರುಳ್ಳಿಯನ್ನು ತಿಂದ ಇಲಿಗಳಲ್ಲಿ ಅದಿರುವಾಯು (ಕ್ಲೋನಿಕ್ ಕನ್‍ವಲ್‍ಷನ್) ಉಂಟಾಗಿ ಉಸಿರಾಟ ನಿಂತು ಅವು ಸಾಯುತ್ತವೆ. ಆದ್ದರಿಂದ ಇವನ್ನು ಇಲಿವಿಷವಾಗಿಯೂ ಬಳಸುವುದಿದೆ. 

	ಮೂತ್ರಪಿಂಡದ ರೋಗಗಳಿಂದ ಬಳಲುವವರಿಗೆ ನರಿ ಈರುಳ್ಳಿಯನ್ನು ಕೊಡಬಾರದು.
(ಎಸ್.ಕೆ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ